ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್
ಮಂಗಳೂರು: ನಗರದ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ ₹40 ಲಕ್ಷ ಚೆಕ್ ಬೌನ್ಸ್ ಪ್ರಕರಣದಲ್ಲಿ ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಸದ್ಯ ವಾರಂಟ್ನ್ನು ತಲಘಟ್ಟಪುರ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಅಂತಾ ವರದಿಯಾಗಿದೆ.
ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್ನಿಂದ ಪದ್ಮಜಾ ರಾವ್ ಹಂತ ಹಂತವಾಗಿ ಸುಮಾರು ₹41 ಲಕ್ಷ ಸಾಲ ಪಡೆದುಕೊಂಡು ಈ ಸಾಲದ ಭದ್ರತೆಗಾಗಿ ಚೆಕ್ ನೀಡಿದ್ದರು ಅಂತಾ ಹೇಳಲಾಗಿದೆ.
ಪದ್ಮಜಾ ರಾವ್ ಸಾಲ ವಾಪಾಸು ಮಾಡದೆ ವಂಚಿಸಿದಾಗ, ವೀರೂ ಟಾಕೀಸ್ ಸಂಸ್ಥೆಯಿಂದ ಅವರು ನೀಡಿರುವ ಚೆಕ್ ಬಳಸಿಕೊಳ್ಳಲು ಮುಂದಾಗಿದೆ. ಆದರೆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದ ಸಮನ್ಸ್ ಸ್ವೀಕರಿಸಲು ನಿರಾಕರಿಸುತ್ತಾ ಬಂದಿದ್ದನ್ನು ಗಮನಿಸಿದ ನ್ಯಾಯಾಲಯವು ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.