ಆಯುಕ್ತರಿಂದ ಕೋವಿಡ್ ಲಸಿಕೆ(Covid Vaccination) ಕಾರ್ಯ ಪ್ರಗತಿ ಬಗ್ಗೆ ಪರಿಶೀಲನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರನೇ ಹಂತದಲ್ಲಿ ಕೋವಿಡ್ ಲಸಿಕೆ(Covid Vaccination) ನೀಡುತ್ತಿರುವ ಸಂಬಂಧ ಮಾನ್ಯ ಆಯುಕ್ತರು ಶ್ರೀ ಎನ್.ಮಂಜುನಾಥ್ ಪ್ರಸಾದ್ ರವರು ಇಂದು ಹಳೆ ವಿಮಾನ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರು ಡಾ. ಸುದರ್ಶನ್ ಬಲ್ಲಾಳ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಹಂತದ ಲಸಿಕೆ ನೀಡಲಾಗುತ್ತಿದ್ದು, ಇಂದು ಮೂರನೇ ದಿನವಾಗಿದೆ. 3ನೇ ಹಂತದ ಲಸಿಕೆ ನೀಡುವ ಮೊದಲನೇ ದಿನ ಕೋವಿನ್ ಪೋರ್ಟಲ್‌ನಲ್ಲಿ ಕೆಲವು ಲೋಪದೋಷಗಳಿದ್ದರಿಂದ 1,063 ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಯಿತು. ಎರಡನೇ ದಿನ ಕೋವಿನ್ ಪೋರ್ಟಲ್‌ನಲ್ಲಿದ್ದ ಕೆಲ ಲೋಪದೋಷಗಳನ್ನು ಸರಿಪಡಿಸಿ 3,128 ಮಂದಿಗೆ ಲಸಿಕೆ ನೀಡಲಾಗಿದೆ. ಇಂದು 26 ಆಸ್ಪತ್ರೆಗಳಲ್ಲಿ 4,600 ಮಂದಿಗೆ ಲಸಿಕೆ ನೀಡುವ ಗುರಿಯಿದೆಯೆಂದು ಆಯುಕ್ತರು ರವರು ತಿಳಿಸಿದರು.

ಕೋವಿನ್-2.0 ಸಾಪ್ಟ್ ವೇರ್ ನಲ್ಲಿ ನೋಂದಣಿ ಮಾಡಿಕೊಂಡು ಮೂರನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ಪೈಕಿ ಪ್ರಾಯೋಗಿಕವಾಗಿ 26 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ವಾರದಿಂದ 100 ಹಾಸಿಗೆಗಳ ಸಾಮರ್ಥ್ಯವುಳ್ಳ 107 ಖಾಸಗಿ ಆಸ್ಪತ್ರೆ, ಪಾಲಿಕೆಯ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರೆಫೆರಲ್ ಆಸ್ಪತ್ರೆಗಳು ಸೇರಿದಂತೆ ಸುಮಾರು 300 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ. ಆ ಬಳಿಕ ಪ್ರತಿನಿತ್ಯ ಸುಮಾರು 60,000 ಮಂದಿಗೆ ಲಸಿಕೆ ನೀಡಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಆಸ್ಪತ್ರೆಗಳನ್ನು ಗುರುತಿಸಿ ಹೆಚ್ಚು ಸೆಷನ್ ಸೈಟ್‌ಗಳನ್ನು ಮಾಡಿ ದಿನಕ್ಕೆ 1 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿಯಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ 60 ವರ್ಷದ ಮೇಲ್ಪಟ್ಟ ಹಾಗೂ 45 ರಿಂದ 59 ವರ್ಷದ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ ನಾಗರಿಕರು ಲಸಿಕೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಕೊಳಗೇರಿ ಪ್ರದೇಶಗಳಲ್ಲಿ ಸುಮಾರು 15 ಲಕ್ಷ ಮಂದಿ ವಾಸಿಸುತ್ತಿದ್ದು, ಅವರಿಗೆ ಕೋವಿನ್ ಪೋರ್ಟಲ್‌ಮಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ಅರಿವಿರುವುದಿಲ್ಲ. ಈ ಸಂಬಂಧ ಕೋಳಗೇರಿ ಪ್ರದೇಶಗಳಲ್ಲಿರುವವರನ್ನು ಗುರುತಿಸಿ ಲಸಿಕೆ ಪಡೆಯಲು ಕರೆತರುವ ಸಲುವಾಗಿ ಪಾಲಿಕೆಯ ಆಶಾ ಕಾರ್ಯಕರ್ತರು, ಎ.ಎನ್.ಎಂಗಳನ್ನು ನಿಯೋಜನೆ ಮಾಡಲಾಗಿದ್ದು, ಮುಂದಿನ ವಾರದಿಂದ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಎಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಪ್ರಾಂಭಿಸಿದಾಗ ಕೆಲ ಸವಾಲುಗಳು ಬರಲಿದ್ದು, ಅದಕ್ಕೆ ಬೇಕಾದ ಸಿದ್ದತೆಗಳನ್ನು ಪಾಲಿಕೆಯಿಂದ ಮಾಡಿಕೊಳ್ಳಲಾಗುತ್ತಿದೆ. ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಬಗ್ಗೆ ಇಂದು ಕೂಡಾ 26 ಆಸ್ಪತ್ರೆಗಳಿಂದ ಫೀಡ್‌ಬ್ಯಾಕ್ ಪಡೆದು ಏನಾದರು ಲೋಪದೋಷಗಳಿದ್ದರೆ ಸರಿಪಡಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಪಡೆಯಲು ನಾಗರೀಕರು ನೋಂದಣಿ ಮಾಡಿಕೊಂಡು ಲಸಿಕೆ ತೆಗೆದುಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ. ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಸಿಕೆ ನೀಡುತ್ತಿದ್ದು, ಮೊದಲ ಲಸಿಕೆ ಪಡೆದ 29ನೇ ದಿನಕ್ಕೆ ಲಸಿಕೆ ಪಡೆಯಲು ಸ್ವಯಂ ಸಂದೇಶ ರವಾನೆಯಾಗಲಿದೆ. ಯಾವ ಲಸಿಕೆ ಪಡೆದಿದ್ದರೆ ಅದೇ ಲಸಿಕೆಯನ್ನು ಪಡೆಯಬೇಕು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಅನ್ಯ ಖಾಯಿಲೆಗಳಿಂದ ಬಳಲುತ್ತಿರುವವರ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಇದುವರೆಗೆ 3.50 ಲಕ್ಷ ಮಂದಿಯ ಸಮೀಕ್ಷೆ ಕಾರ್ಯ ಮುಗಿದಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ