ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ರವರಿಂದ ಸಭೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದಂತೆ ಮಾನ್ಯ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಶ್ರೀ ವೆಂಕಟೇಶನ್ ರವರ ಅಧ್ಯಕ್ಷತೆಯಲ್ಲಿ ಇಂದು ಹೊಸ ಕುಮಾರ ಕೃಪಾ ಅತಿಥಿಗೃಹ ಸಭಾ ಕೊಠಡಿ-01ರಲ್ಲಿ ಸಭೆ ನಡೆಯಿತು. ಈ ವೇಳೆ ರಾಜ್ಯ ಸಫಾಯಿ ಕರ್ಮಚಾರಿ ಆರೋಗ್ಯದ ಅಧ್ಯಕ್ಷರು ಶ್ರೀ ಶಿವಣ್ಣ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶ್ರೀ ಹನುಮಂತಪ್ಪ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಮಾಜಿ ಸದಸ್ಯರು ಶ್ರೀ ಜಗದೀಶ್ ಹಿರೇಮನಿ, ಮಾನ್ಯ ಆಯುಕ್ತರು ಶ್ರೀ ಎನ್.ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತರು ಶ್ರೀ ಡಿ.ರಂದೀಪ್, ಉಪ ಆಯುಕ್ತರು(ಆಡಳಿತ) ಶ್ರೀ ಲಿಂಗಮೂರ್ತಿ, ಜಂಟಿ ಆಯುಕ್ತರು(ಘನತ್ಯಾಜ್ಯ) ಶ್ರೀ ಸರ್ಫರಾಜ್ ಖಾನ್, ಮುಖ್ಯ ಇಂಜಿನಿಯರ್(ಘನತ್ಯಾಜ್ಯ) ವಿಶ್ವನಾಥ್, ಅಧೀಕ್ಷಕ ಇಂಜಿನಿಯರ್(ಘನತ್ಯಾಜ್ಯ) ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಶದಲ್ಲಿ ಲಕ್ಷಾಂತರ ಸಫಾಯಿ ಕರ್ಮಚಾರಿಗಳಿದ್ದಾರೆ. ಅವರಿಗೆಲ್ಲಾ ಉತ್ತಮ ಸೌಲಭ್ಯಗಳನ್ನು ಕಲ್ಪಸಿಬೇಕು. ಅವರಿಗಾಗಿ ಇರುವ ಅನೇಕ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಟಾನಗೊಳ್ಳಬೇಕು. ನಾನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷನಾದ ಬಳಿಕ ಪ್ರಥಮ ಬಾರಿಗೆ ಈ ರಾಜ್ಯಕ್ಕೆ ಬಂದಿದ್ದು, ನಿಮ್ಮ ಅಹವಾಲುಗಳು/ಮನವಿಗಳನ್ನು ತಿಳಿಸಿ. ಉನ್ನತ ಮಟ್ಟದಲ್ಲಿ ಅವುಗಳನ್ನು ಚರ್ಚಿಸಿ ಇತ್ಯರ್ಥ ಪಡಿಸಲು ಕ್ರಮವಹಿಸಲಾಗುವುದು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಶ್ರೀ ವೆಂಕಟೇಶನ್ ರವರು ತಿಳಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆಗೆ ಕಂಪನಿ ಸ್ಥಾಪಿಸುವ, ಪೌರಕಾರ್ಮಿಕರಿಗೆ ನಿವೇಶನಗಳು ನೀಡುವ, ಪೌರಕಾರ್ಮಿಕರಿಗೆ ಸರಿಯಾಗಿ ಪಿಎಫ್ ಸೌಲಭ್ಯ ನೀಡುವ, ಕೆಲಸದ ಅವಧಿಯಲ್ಲಿ ಮೃತಪಟ್ಟವರಿಗೆ ಕೊಡಬೇಕಾದ 10 ಲಕ್ಷ ಪರಿಹಾರ ಹಣವನ್ನು ಸಮಯಕ್ಕೆ ಸರಿಯಾಗಿ ನೀಡುವ, ಕೆಲಸ ಖಾಯಂಮಾತಿಗೆ 45 ವರ್ಷದ ಬದಲು 55ವರ್ಷಕ್ಕೆ ವಿಸ್ತರಿಸುವ, ಪೌರಕಾರ್ಮಿಕರ ಕಾಲೋನಿಗಳ ಅಭಿವೃದ್ಧಿ, ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುವ, ರಸ್ತೆಗುಡಿಸುವವರನ್ನು ಮಾತ್ರ ಪೌರಕಾರ್ಮಿಕರೆಂದು ಪರಿಗಣಿಸದೆ ಆಟೋ ಟಿಪ್ಪರ್, ಕಾಂಪ್ಯಾಕ್ಟರ್ ಸಹಾಯಕರು, ಚಾಲಕರನ್ನು ಕೂಡಾ ಪೌರಕಾರ್ಮಿಕರೆಂದು ಪರಿಗಣಿಸುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಚರ್ಚೆಯಾದ ವಿಷಗಳ ಬಗ್ಗೆ ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ರವರು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 2017 ರಲ್ಲಿ ಗುತ್ತಿಗೆ ಆಧಾರದ ಮೇಲೆ ರಸ್ತೆ ಗುಡಿಸುವ ಸುಮಾರು 16,000 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಇದೀಗ ಪಾಲಿಕೆ ವತಿಯಿಂದ ನೇರ ವೇತನ ನೀಡಲಾಗುತ್ತಿದೆ. ಎಲ್ಲಾ ಪೌರಕಾರ್ಮಿಕರಿಗೆ ತಿಂಗಳ 7ನೇ ತಾರೀಖಿನ ಒಳಗೆ ವೇತನ ನೀಡಲಾಗುತ್ತಿದೆ. ಇದೀಗ ಸಂಬಳ ನೀಡುವ ರಶೀದಿಯನ್ನು ನೀಡಲು ಸಹ ಕ್ರಮವಹಿಸಲಾಗುತ್ತಿದೆ. ಜೊತೆಗೆ ಎಲ್ಲಾ ಪೌರಕಾರ್ಮಿಕರಿಗೂ ಒಂದೇ ರೀತಿಯ ಸಮವಸ್ತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪಾಲಿಕೆಯಲ್ಲಿ ಕಸ ಗುಡಿಸುವವರು 17,000 ಪೌರಕಾರ್ಮಿಕರಿದ್ದಾರೆ. ಅವರು ಪಾಲಿಕೆಯ ಅಡಿಯೇ ಕೆಲಸ ಮಾಡಲಿದ್ದಾರೆ. ಅವರಿಗೂ ಕಂಪನಿಗೆ ಯಾವುದೇ ಸಂಬಂಧವಿರುವುದಿಲ್ಲ. ಗುತ್ತಿಗೆದಾರರು ಆಟೋ ಟಿಪ್ಪರ್‌ಗಳ ಮೂಲಕ ಮನೆ-ಮನೆಯಿಂದ ಕಸ ಸಂಗ್ರಹಿಸಿ ಕಾಂಪ್ಯಾಕ್ಟರ್ ಮೂಲಕ ಸಂಸ್ಕರಣಾ ಘಟಕಗಳಿಗೆ ಹೋಗುವುದನ್ನು ಮಾತ್ರ ಕಂಪನಿ ಮೂಲಕ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದರಿಂದ ಯಾರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ಮೀಸಲಾತಿ ಅನುಸಾರವೇ ಕಂಪನಿ ಮೂಲಕ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಪೌರಕಾರ್ಮಿಕರಿಗೆ ಪಿಎಫ್ ನೀಡಲಾಗುತ್ತಿದೆ. ಕೆಲವರು ತಪ್ಪು ಮಾಹಿತಿ ನೀಡುವುದರಿಂದ ಪಿಎಫ್ ಸಿಗುತ್ತಿಲ್ಲ. ಈ ಸಂಬAಧ ತಪ್ಪು ಮಾಹಿತಿ ನೀಡಿರುವವರ ಬಳಿ ನಿಖರ ಮಾಹತಿ ಪಡೆದು ಪಿಎಫ್ ಇಲಾಖೆಗೆ ಮಾಹಿತಿ ನೀಡಿ ಪಿಎಫ್ ಬರುವಂತೆ ಮಾಡಲಾಗುವುದು. ರಾಜ್ಯ ಸರ್ಕಾರ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ವತಿಯಿಂದ 1 ಲಕ್ಷ ಮನೆ ನಿರ್ಮಾಣ ಮಾಡುತ್ತಿದ್ದು, ನಿವೇಶನ ಬೇಕಿರುವ ಪೌರಕಾರ್ಮಿಕರು ಪಟ್ಟಿ ಮಾಡಿ ನೀಡಿದರೆ ಆದ್ಯತೆ ಮೇರೆಗೆ ನಿವೇಶನಗಳನ್ನು ನೀಡಲು ಕ್ರಮವಹಿಸಲಾಗುವುದು. ಇನ್ನು ಬಿಡಿಎ ವತಿಯಿಂದ 264 ನಿವೇಶನಗಳನ್ನು ಪೌರಕಾರ್ಮಿಕರಿಗೆ ನೀಡಲಾಗುತ್ತಿದ್ದು, ಈ ಪೈಕಿ ಮೊದಲ ಹಂತದಲ್ಲಿ ನಿವೇಶನಗಳನ್ನು ನೀಡಿರುವವರಿಗೆ ಇನ್ನೊಂದು ವಾರದಲ್ಲಿ ನೋಂದಣಿ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿರ ಕಾಲೋನಿಗಳ ಅಭಿವೃದ್ಧಿ, ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮವಹಿಸಲಾಗುವುದು. ಕೆಲಸದ ಅವಧಿಯಲ್ಲಿ ಮೃತಪಟ್ಟವರಿಗೆ ಕೊಡಬೇಕಾದ 10 ಲಕ್ಷ ಪರಿಹಾರ ಹಣವನ್ನು ಸಮಯಕ್ಕೆ ಸರಿಯಾಗಿ ನೀಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಲಾಗುವುದು. ಖಾಯಂ ವರ್ಷವನ್ನು 55 ವರ್ಷಕ್ಕೆ ಹೆಚ್ಚಳ ಮಾಡುವ ಸಲುವಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಗಳ ಬಳಿ ವಿಶ್ರಾಂತಿ ಕೊಠಡಿ ನಿರ್ಮಿಸುವ ಸಲುವಾಗಿ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ 200 ಮಸ್ಟರಿಂಗ್ ಕೇಂದ್ರಗಳಲ್ಲಿ ವಿಶ್ರಾಂತಿ ಕೊಠಡಿ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಇನ್ನು ಮಧ್ಯಾಹ್ನದ ವೇಳೆ ಊಟ ನೀಡಲಾಗುತ್ತಿತ್ತು. ಕೆಲವರು ಊಟ ಬೇಡ ಹಣ ಕೊಡಿ ಎಂದು ಕೇಳಿದ ಪರಿಣಾಮ ಪೌರಕಾರ್ಮಿಕರ ಖಾತೆಗೆ ಸಂಬಳದ ಜೊತೆಗೆ ಊಟದ ಹಣವನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.

ಕೊನೆಯದಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಶ್ರೀ ವೆಂಕಟೇಶನ್ ರವರು ಮಾತನಾಡಿ, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ನಮ್ಮ ಗುರಿಯಾಗಿದೆ. ನಿಮ್ಮ ಸಮಸ್ಯೆಗಳ ಬಗ್ಗೆ ಮನವಿ ಪತ್ರಗಳನ್ನು ಕೊಡಿ. ಸ್ಥಳೀಯ ಮಟ್ಟದಲ್ಲಿ ಇತ್ಯರ್ಥವಾಗದ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಇತ್ಯರ್ಥಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಕ್ಕರಾಯನಕೆರೆ ಪೌರಕಾರ್ಮಿಕರ ವಸತಿ ಕಾಲೋನಿಗೆ ಭೇಟಿ ನೀಡಿ ಪರಿಶಿಲನೆ:

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಶ್ರೀ ವೆಂಕಟೇಶನ್ ರವರು ಸಭೆ ಮುಗಿದ ಬಳಿಕ ಅಧಿಕಾರಿಗಳ ಜೊತೆಗೆ ಜಕ್ಕರಾಯನಕೆರೆ ಪೌರಕಾರ್ಮಿಕರ ವಸತಿ ಕಾಲೋನಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದರು. ಈ ವೇಳೆ 4 ಎಕರೆ ಮೈದಾನದಲ್ಲಿ ಪೊಲೀಸ್ ಇಲಾಖೆಯು ಸೀಜ್ ಮಾಡಿರುವ ವಾಹನಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಮಕ್ಕಳಿಗೆ ಆಟವಾಡಲು ಸಮಸ್ಯೆಯಾಗುತ್ತಿದೆ. ಜೊತೆಗೆ ಸೀವೇಜ್ ಬ್ಲಾಕ್ ಆಗಿದ್ದು, ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ದೂರಿದರು. ಅದಕ್ಕೆ ಅಧ್ಯಕ್ಷರು ರವರು ಪ್ರತಿಕ್ರಿಯಿಸಿ, ಮೈದಾನದಲ್ಲಿರುವ ವಾಹನಗಳನ್ನು ತೆರವು ಮಾಡುವ ಹಾಗೂ ಸ್ಯಾನಿಟರಿ ಲೈನ್ ಸರಿಪಡಿಸುವ ಬಗ್ಗೆ ಮನವಿ ಪತ್ರ ನೀಡಿ. ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿ ರವರ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು. ಜೊತೆಗೆ ಪೌರಕಾರ್ಮಿಕರ ಕಾಲೋನಿಯನ್ನು ಸ್ವಚ್ಛವಾಗಿಟ್ಟುಕೊಂಡಿರುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷರು, ಪ್ರಧಾನಿ ಮಂತ್ರಿ ಆರೋಗ್ಯ ಭೀಮಾ ಯೋಜನೆಯಡಿ ಅನೇಕ ಸೌಲಭ್ಯಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ