ಮಾನ್ಯ ಆರೋಗ್ಯ ಸಚಿವರು ರವರಿಂದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪರಿಶೀಲನಾ ಸಭೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದಂತೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾನ್ಯ ಆರೋಗ್ಯ ಸಚಿವರು ಡಾ. ಕೆ.ಸುಧಾಕರ್ ರವರು ಇಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಜೊತೆ ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಅಪರ ಮುಖ್ಯ ಕಾರ್ಯದರ್ಶಿ(ಆರೋಗ್ಯ ಇಲಾಖೆ) ಜಾವೇದ್ ಅಕ್ತರ್, ಮಾನ್ಯ ಆಯುಕ್ತರು ಶ್ರೀ ಎನ್.ಮಂಜುನಾಥ್ ಪ್ರಸಾದ್, ಆಯುಕ್ತರು(ಆರೋಗ್ಯ ಇಲಾಖೆ) ತ್ರಿಲೋಕ್ ಚಂದ್ರ, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರು ಅರುಂಧತಿ ಚಂದ್ರಶೇಖರ್, ವಿಶೇಷ ಆಯುಕ್ತರುಗಳಾದ ಶ್ರೀ ರಾಜೇಂದ್ರ ಚೋಳನ್, ಶ್ರೀ ಡಿ. ರಂದೀಪ್, ಶ್ರೀ ಮನೋಜ್ ಜೈನ್, ಶ್ರೀ ರೆಡ್ಡಿ ಶಂಕರ ಬಾಬು, ಶ್ರೀಮತಿ ತುಳಸಿ ಮದ್ದಿನೇನಿ, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿದ್ದು, ನಿನ್ನೆ ಸುಮಾರು 1,400 ಪ್ರಕ್ರಣಗಳು ಕಂಡುಬಂದಿದೆ. ಕಳೆದ ನಾಲ್ಕು ತಿಂಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕಣಗಳು ಕಂಡುಬಂದಿದ್ದು, ಈ ಪೈಕಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೋವಿಡ್ ಉಲ್ಬಣವಾಗುವುದನ್ನು ನಿಯಂತ್ರಿಸಲು ಪಾಲಿಕೆ ಕ್ರಮವಹಿಸುತ್ತಿದೆಯೆಂದು ಆರೋಗ್ಯ ಸಚಿವರು ಡಾ. ಕೆ.ಸುಧಾಕರ್ ರವರು ತಿಳಿಸಿದರು.

ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶೇ. 60ಕ್ಕೂ ಹೆಚ್ಚು ಹೊರರಾಜ್ಯಗಳಿಂದ ನಗರಕ್ಕೆ ಬರುತ್ತಿರುವವರಿಂದಲೇ ಕೋವಿಡ್ ಪ್ರಕರಣಗಳು ದೃಢಪಡುತ್ತಿರುವುದು ಕಂಡಬಂದಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಇಲ್ಲಿಯೇ ವಾಸಿಸುವ/ಉಳಿದುಕೊಳ್ಳುವ ಎಲ್ಲರೂ ಏಪ್ರಿಲ್ 1 ರಿಂದ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ವರದಿ ನೆಗೆಟಿವ್ ಪ್ರತಿ ತರುವುದು ಜಾರಿಯಾಗಲಿದೆ ಎಂದು ಹೇಳಿದರು.

ನಗರದ ಅಪಾರ್ಟ್ಮೆಂಟ್ಸ್ ಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಅಲ್ಲದೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟರೆ ಕುಟುಂಬದ ಉಳಿದೆಲ್ಲಾ ಸದಸ್ಯರಿಗೂ ಕೋವಿಡ್ ಸೋಂಕು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಎಚ್ಚರಿಕೆಯಿಂದಿರಬೇಕು. ನಗರದ ಮಾರುಕಟ್ಟೆ, ಚಿತ್ರಮಂದಿರ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮದುವೆ ಮಂಟಪ, ಧಾರ್ಮಿಕ ಸ್ಥಳ, ಶಾಲಾ-ಕಾಲೇಜು ಆವರಣ, ವಿವಿಧ ಸ್ಥಳ ಸೇರಿದಂತೆ ಹೆಚ್ಚು ಜನಸಂದಣಿ ಸೇರುವಕಡೆ ಮಾರ್ಷಲ್‌ಗಳು ಹೋಗಿ ಸಾಮಾಜಿಕ ಅಂತಹ, ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸಲಿದ್ದಾರೆ. ಇದರ ಜೊತೆಗೆ ನಗರದಲ್ಲಿ ಯಾವುದಾದರು ಕಾರ್ಯಕ್ರಮ/ಸಮಾರಂಭಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡದಿರುವುದು ಕಂಡುಬಂದರೆ ಸಂಬಂಧಪಟ್ಟ ಮಾಲೀಕರ ಜೊತೆಗೆ ಆಯೋಜಕರನ್ನು ಕೂಡಾ ಹೊಣೆಗಾರರನ್ನಾಗಿಸಿ, ಆಯೋಜಕರಿಗೂ ದಂಡ ವಿಧಿಸಲಾಗುವುದು. ಯಾವುದೇ ಕಾರ್ಯಕ್ರಮ/ಸಮಾರಂಭಗಳಾಗಲಿ ಕಡ್ಡಾಯವಾಗಿ ತೆರೆದ ಸಭಾಂಗಣದಲ್ಲಿ 500 ಮಂದಿ ಹಾಗೂ ಮುಚ್ಚಿದ ಸಭಾಂಗಣಗದಲ್ಲಿ 200 ಮಂದಿ ಮಾತ್ರವಿರಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಪ್ರತಿ ವಾರ್ಡ್ ಗೊಂದು ಆಂಬ್ಯುಲೆನ್ಸ್ ನಿಯೋಜನೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕಣಗಳು ಕ್ರಮೇಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ವಾರ್ಡ್ಗೊಂದು ಆಂಬ್ಯುಲೆನ್ಸ್ ಅನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಅವಶ್ಯಕ್ಕನುಗುಣವಾಗಿ ಸೋಂಕಿನ ಪ್ರಮಾಣ ನೋಡಿಕೊಂಡು ಹೆಚ್ಚಿನ ಆಂಬ್ಯುಲೆನ್ಸ್ ನಿಯೋಜನೆ ಮಾಡಿಕೊಳ್ಳಲು ಪಾಲಿಕೆ ಕ್ರಮವಹಿಸಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಕ್ವಾರಂಟೈನ್ ವಾಚ್ ತಂತ್ರಾಂಶದ ಮೂಲಕ ನಿಗಾ:

ನಗರದಲ್ಲಿ ಸೋಂಕು ದೃಢಪಟ್ಟವರ ಮೇಲೆ ನಿಗಾವಹಿಸಲು ಕ್ವಾರಂಟೈನ್ ವಾಚ್ ತಂತ್ರಾಶಂವಿದ್ದು, ಆ ತಂತ್ರಾಂಶದ ಮೂಲಕ ಹೋಮ್ ಐಸೋಲೇಷನ್ ನಲ್ಲಿರುವವರ ಮೇಲೆ ನಿಗಾವಹಿಸಲು ಕ್ರಮವಹಿಸಲಾಗುತ್ತದೆ. ಅಲ್ಲದೆ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಸರಿಯಾದ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.

ಸೋಂಕು ದೃಢಪಟ್ಟವರಿಗೆ ಮುದ್ರೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ದೃಢಪಟ್ಟಿರುವ ಎಲ್ಲರಿಗೂ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ(ಸೀಲ್) ಹಾಕಲಾಗುವುದು. 20 ರಿಂದ 40 ವರ್ಷದೊಳಗಿರುವವರಿಗೆ ಹೆಚ್ಚು ಸೋಂಕು ಕಂಡುಬರುತ್ತಿದ್ದು, 70 ವರ್ಷ ಮೇಲ್ಪಟ್ಟವರಲ್ಲಿ ಗಂಭೀರತೆ ಕಂಡುಬರುತ್ತಿದೆ. ಎ-ಸಿಮ್ಟಮ್ಯಾಟಿಕ್ ಬಂದು ಮನೆಯಲ್ಲೇ ಐಸೋಲೇಟ್ ಆಗಿರುವವರು ಓಡಾಟ ಮಾಡಬಾರದೆಂಬ ಕಾರಣಕ್ಕೆ ಸೀಲ್ ಹಾಕಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.

ಪರಿಣಾಮಕಾರಿಯಾಗಿ ಲಸಿಕೆ ನೀಡಲು ಕ್ರಮ:

ಪಾಲಿಕೆ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟವರು 25 ಲಕ್ಷಕ್ಕೂ ಹೆಚ್ಚಿದ್ದು, ಎಲ್ಲರಿಗೂ ಲಸಿಕೆ ನೀಡಲು ಕ್ರಮವಹಿಸಲಾಗುವುದು. ಈ ಸಂಬAಧ ನಗರದಲ್ಲಿ 450 ಕೇಂದ್ರಗಳಲ್ಲಿ ಪ್ರತಿನಿತ್ಯ 80,000 ಲಸಿಕೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಅಷ್ಟು ಪ್ರಮಾಣದಲ್ಲಿ ಲಸಿಕೆ ಪಡೆಯಲು ನಾಗರಿಕರು ಬರುತ್ತಿಲ್ಲ. ಆದ್ದರಿಂದ ನಾಗರಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲೂ ಹೆಲ್ಪ್ ಡೆಸ್ಕ್, ಕಿಯೋಸ್ಕ್ ಹಾಗೂ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

24 ಗಂಟೆಯಲ್ಲಿ ಪರೀಕ್ಷಾ ವರದಿ:

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿದ ವರದಿ 24 ಗಂಟೆಯೊಳಗಾಗಿ ಪಡೆದು, ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕನಿಷ್ಟ 20 ಪ್ರಾಥಮಿಕ ಹಾಗೂ ದ್ವಿಯ ಸಂಪರ್ಕಿತರನ್ನು ಪತ್ತೆಹಚ್ಚಿ ಐಸೋಲೇಟ್ ಮಾಡಲು ಕ್ರಮವಹಿಸಲಾಗುತ್ತಿದೆ ಆರೋಗ್ಯ ಸಚಿವರು ತಿಳಿಸಿದರು.

ನಾಗರಿಕರ ಸಹಕಾರ ಅತ್ಯಗತ್ಯ:

ನಗರದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುವುದನ್ನು ತಡೆಯಬೇಕಾದರೆ ನಾಗರಿಕರ ಸಹಕಾರ ಬಹಳ ಮುಖ್ಯ. ಆದ್ದರಿಂದ ಎಲ್ಲಾ ನಾಗರಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜೊತೆಗೆ ಕಾರ್ಯಕ್ರಮ/ಸಮಾರಂಭ/ಜನ ಸಂದಣಿ ಪ್ರದೇಶಗಳಿಗೆ ಹೋಗುವುದನ್ನು 2 ತಿಂಗಳಗಳ ಕಾಲ ಕಡಿಮೆ ಮಾಡಿ. ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿ ಬೆಂಗಳೂರನ್ನು ಕೋವಿಡ್ ಮುಕ್ತ ನಗರವನ್ನಾಗಿಸಬೇಕು ಆರೋಗ್ಯ ಸಚಿವರು ತಿಳಿಸಿದರು.

ಹಾಸಿಗೆಗಳ ಸಂಖ್ಯೆ ಪೋರ್ಟಲ್‌ನಲ್ಲಿ ಲಭ್ಯ:

ನಗರದಲ್ಲಿರುವ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಎಷ್ಟು ಖಾಲಿಯಿವೆ, ಎಷ್ಟು ಐಸಿಯು ಹಾಸಿಗೆಗಳಿವೆ ಎಂಬುದನ್ನು ತಿಳಿಯಲು ಸರಳೀಕೃತ ವ್ಯವಸ್ಥೆ ಮಾಡಿ, ಆನ್‌ಲೈನ್ ಪೋರ್ಟಲ್ ನಲ್ಲಿ ಮಾಹಿತಿ ಅಪ್ಲೋಡ್ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಪೋರ್ಟಲ್ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಆಯುಕ್ತರು ಶ್ರೀ ಎನ್.ಮಂಜುನಾಥ್ ಪ್ರಸಾದ್ ರವರು ಸಭೆಯಲ್ಲಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ನಿನ್ನೆ 51,000 ಪರೀಕ್ಷೆಗಳನ್ನು ಮಾಡಲಾಗಿದೆ. ನಗರದ ದಾಸರಹಳ್ಳಿ ಹಾಗೂ ಆರ್.ಆರ್.ನಗರ ವಲಯ ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಹೆಚ್ಚು ಪ್ರಕರಣಗಳು ಹೊರ ರಾಜ್ಯದಿಂದ ಬರುತ್ತಿರುವವರಿಂದ ಹಾಗೂ ಶೇ. 70 ರಷ್ಟು ಅಪಾರ್ಟ್ಮೆಂಟ್‌ಗಳಲ್ಲಿ ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪ್ರಕಣಗಳು ಕಂಡುಬರುತ್ತಿಲ್ಲ. ಕೋವಿಡ್ ನಿಯಮ ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಲು 216 ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ