ಮಾನ್ಯ ಮುಖ್ಯ ಆಯುಕ್ತರು ರವರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಿರುವ ಬಗ್ಗೆ:

ಬಿಬಿಎಂಪಿಯಲ್ಲಿ ಕಂದಾಯ ಇಲಾಖೆಯು ಬಹುಮುಖ್ಯ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಬಾಕಿ ವಸೂಲಾತಿ, ಕಡಿಮೆ ಮೌಲ್ಯಮಾಪನವಾಗಿರುವ ಸ್ವತ್ತುಗಳು, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರುವುದರ ಮೇಲೆ ವಿಶೇಷ ಗಮನವಹಿಸಿ ಹೆಚ್ಚು ತೆರಿಗೆ ವಸೂಲಿ ಮಾಡುವಂತೆ ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತರು, ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯು ಇದುವರೆವಿಗೆ 1,563.78 ಕೋಟಿ ರೂ. ಸಂಗ್ರಹವಾಗಿದೆ. ಸದ್ಯ ನಗರದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದು, ಎಲ್ಲಾ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ವಸೂಲಾತಿ ಮಾಡುವ ಬಗ್ಗೆ ಹೆಚ್ಚು ಗಮನವರಿಸಬೇಕು. ಆಸ್ತಿ ತೆರಿಗೆ ಸಂಗ್ರಹಿಸಲು ಕಂದಾಯ ಅಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿ ಹೆಚ್ಚು ತೆರಿಗೆ ಸಂಗ್ರಹಿಸಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ತೆರಿಗೆ ವಸೂಲಿ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು. ಈ ಸಂಬಂಧ ಎಲ್ಲಾ ಸಹಾಯಕ ಕಂದಾಯ ಅಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರ ಪಟ್ಟಿಯ ಅನುಸಾರ ನೋಟೀಸ್ ಜಾರಿಗೊಳಿಸಿ ಬಾಕಿ ವಸೂಲಾತಿ ಮಾಡಬೇಕು. ಅಲ್ಲದೆ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆಸ್ತಿ ಸಂಗ್ರಹಿಸಬೇಕು ಎಂದು ತಿಳಿಸಿದರು.

ಖಾತಾ ಮೇಳ ಮಾಡಿ: ಮುಖ್ಯ ಆಯುಕ್ತರು.

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಆಸ್ತಿ ಮಾಲೀಕರಿಗೆ ‘ಖಾತಾ ಮೇಳ’ ಏರ್ಪಡಿಸುವ ಮೂಲಕ ಆಸ್ತಿ ತೆರಿಗೆ ವ್ಯಾಪ್ತಿಗೆ ಆಸ್ತಿಗಳನ್ನು ಸೇರ್ಪಡೆ ಮಾಡಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮವಹಿಸಬೇಕು ಎಂದು ಮುಖ್ಯ ಆಯುಕ್ತರು ತಿಳಿಸಿದರು.

ಶೇ.‌5ರಷ್ಟು ರಿಯಾಯಿತಿ ಸಿಗುವ ಬಗ್ಗೆ ಮಾಹಿತಿ ನೀಡಿ ಹೆಚ್ಚು ತೆರಿಗೆ ಸಂಗ್ರಹಿಸಿ:

ನಗರದಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಷ್ಟು ರಿಯಾಯಿತಿಯನ್ನು ದಿನಾಂಕ: 30-06-2021 ರವರೆಗೆ ನೀಡಿದ್ದು, ಅದರೊಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಶೇ.5 ರಷ್ಟು ರಿಯಾಯಿತಿ ಸಿಗಲಿದೆ. ಈ ಸಂಬಂಧ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ‌ ಅಧೀನ ಸಿಬ್ಬಂದಿಗಳ ಮುಖಾಂತರ ಆಸ್ತಿ ಮಾಲೀಕರಿಗೆ ಶೇ.5 ರಷ್ಟು ರಿಯಾಯಿತಿ ಸಿಗುವ ಬಗ್ಗೆ ಮಾಹಿತಿ ನೀಡಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಲು ಮುಖ್ಯ ಆಯುಕ್ತರು ತಿಳಿಸಿದರು.

ವಿಶೇಷ ಆಯುಕ್ತರು(ಕಂದಾಯ) ಬಸವರಾಜ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ಮಾಡದಿರುವವರಿಗೆ ಡಿಮಾಂಡ್ ನೋಟೀಸ್ ಹಾಗೂ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟೀಸ್ ಜಾರಿಗೊಳಿಸಿ ತ್ವರಿತವಾಗಿ ಆಸ್ತಿ ತೆರಿಗೆ ಸಂಗ್ರಹಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಯೊಳಗೆ ತರವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ತೆರಿಗೆ ಕಟ್ಟಡದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಆಸ್ತಿ ತೆರಿಗೆ ವಸೂಲಿ ಮಾಡಿ. ಈ ಬಾರಿ ಆಸ್ತಿ ತೆರಿಗೆ ಸಂಗ್ರಹಿಸಬೇಕಾದ ಗುರಿಯನ್ನು ತಲುಪಬೇಕು. ಈ ಸಂಬಂಧ ಎಲ್ಲಾ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿ ಮಾಡದವರಿಂದತೆರಿಗೆ ವಸೂಲಿ ಮಾಡಲು ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತರು(ಕಂದಾಯ) ಬಸವರಾಜು, ಎಲ್ಲಾ ವಲಯದ ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ