ವಾಹನ ಸವಾರರಿಗೆ ಗುಡ್​ ನ್ಯೂಸ್​: ಒಟ್ಟಿಗೆ ದಂಡ ಕಟ್ಟಬೇಕಿಲ್ಲ, ಡಿಜಿಟಲ್​ ಡಿಎಲ್​, ಆರ್​ಸಿ ಬುಕ್​ಗೆ ಅಸ್ತು

ಬೆಂಗಳೂರು: ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಡಾ.ಬಿ.ಆರ್​. ರವಿಕಾಂತೇಗೌಡ ಅವರು ಗುಡ್​ ನ್ಯೂಸ್​ ಒಂದನ್ನು ನೀಡಿದ್ದಾರೆ. ಇನ್ಮುಂದೆ ತಪಾಸಣೆಯ ವೇಳೆ ಡಿಜಿಟಲ್​ ದಾಖಲೆಗಳನ್ನೇ ಪ್ರದರ್ಶನ ಮಾಡಬಹುದೆಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸರ್ಕಾರದ ಡಿಜಿ ಲಾಕರ್ ಹಾಗೂ ಎಮ್ ಪರಿವಾಹನ್ ಆ್ಯಪ್​ಗಳನ್ನು ಸಾರ್ವಜನಿಕರು ಬಳಸಬಹುದು. ಇನ್ಮುಂದೆ ಡ್ರೈವಿಂಗ್​ ಲೈಸೆನ್ಸ್​, ನೋಂದಣಿ ಪ್ರಮಾಣ ಪತ್ರ, ವಿಮೆ, ಫಿಟ್‍ನೆಸ್ ಪ್ರಮಾಣ ಪತ್ರ, ಪರ್ಮಿಟ್, ವಾಯುಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿ ಲಾಕರ್ ಆ್ಯಪ್​ಗಳಲ್ಲಿ ತೋರಿಸಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ಭೌತಿಕ ದಾಖಲೆಗಳನ್ನು ತೋರಿಸೋ ಅವಶ್ಯಕತೆ ಇಲ್ಲ
ಇನ್ಮುಂದೆ ಭೌತಿಕವಾಗಿ ಪೋಲಿಸರಿಗೆ ದಾಖಲೆಗಳನ್ನು ತೋರಿಸುವ ಅವಶ್ಯಕತೆ ಇಲ್ಲ ಮತ್ತು ತೋರಿಸುವಂತೆ ಒತ್ತಾಯ ಮಾಡುವಂತೆಯೂ ಇಲ್ಲ. ಒಂದು ಪಕ್ಷದಲ್ಲಿ ಪೋಲಿಸರು ಒತ್ತಾಯಿಸಿದ್ದೇ ಆದಲ್ಲಿ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ವಾಟ್ಸ್​ಆ್ಯಪ್​, ಈಮೇಲ್​ ದಾಖಲೆ ಸ್ವೀಕರಿಸುವುದಿಲ್ಲ
ಕೇಂದ್ರ ಸರ್ಕಾರದ ಡಿಜಿ ಲಾಕರ್ ಹಾಗೂ ಎಮ್ ಪರಿವಾಹನ್ ಆ್ಯಪ್ ಗಳಲ್ಲಿ ಡಿಜಿಟಲ್ ರೂಪದಲ್ಲಿರುವ ದಾಖಲೆಗಳು ಸ್ವೀಕಾರಾರ್ಹವಾಗಿದ್ದು, ವಾಟ್ಸಪ್, ಇ ಮೇಲ್ ನಲ್ಲಿ ದಾಖಲಾತಿಗಳನ್ನು ತೋರಿಸಿದ್ದರೆ ಅದನ್ನು ಸ್ವೀಕರಿಸುವುದಿಲ್ಲ ಎಂದು ಎಂದು ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.

ಒಟ್ಟಿಗೆ ಪಾವತಿಸುವಂತೆ ಒತ್ತಾಯಿಸುವಂತಿಲ್ಲ
ಹಳೆಯ ಎಲ್ಲ ದಂಡಗಳನ್ನು ಒಟ್ಟಿಗೆ ಪಾವತಿ ಮಾಡುವಂತೆ ಪೊಲೀಸರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿರುವುದರಿಂದ ಪೇಟಿಎಂ ಮೂಲಕ ಒಂದು ಅಥವಾ ಎರಡು ಉಲ್ಲಂಘನೆಯ ದಂಡವನ್ನು ಪಾವತಿ ಮಾಡಬಹುದು ಎಂದು ಆಯುಕ್ತರು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ದಂಡ ಸಂಗ್ರಹ ಮಾಡಲಾಗಿದೆ. ಒಂದು ದಿನಕ್ಕೆ ಎಫ್​ಟಿವಿಆರ್​ ಮೂಲಕ 45 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ನಗರದಲ್ಲಿ ಒಟ್ಟು 400 ಕೋಟಿ ರೂ. ನಷ್ಟು ಸಂಚಾರ ನಿಯಮ ಅಡಿಯಲ್ಲಿ ದಂಡ ವಸೂಲಿ ಆಗಬೇಕಿದೆ ಎಂದು ರವಿಕಾಂತೇಗೌಡ ಅವರು ಮಾಹಿತಿ ನೀಡಿದರು

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ