ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಲು – ಜೀವಿಕ ಒತ್ತಾಯ

ಶಿಡ್ಲಘಟ್ಟ: ಜೀವಿಕ – (ಜೀತ ವಿಮುಕ್ತಿ ಕರ್ನಾಟಕ) ರಾಜ್ಯ ಸಂಚಾಲಕರಾದ ಡಾ. ಕಿರಣ್ ಕಮಲ್ ಪ್ರಸಾದ್ ರವರ ಸಾರಥ್ಯದಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ 430 ಜೀತದಾಳುಗಳಿಗೆ ಸಮಗ್ರ ಪುನರ್ವಸತಿ, ಸರ್ಕಾರದ ಆದೇಶದಂತೆ ಜೀತ ವಿಮುಕ್ತರಿಗೆ ಎರಡು ಎಕರೆ ಭೂಮಿ ಮಂಜೂರು ಮಾಡುವಂತೆ ಹಾಗೂ ಎಲ್ಲಾ ವಲಯಗಳಲ್ಲಿ, ಎಲ್ಲ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿ ಶಿಡ್ಲಘಟ್ಟ ಬಸ್ ನಿಲ್ದಾಣದಿಂದ ಶಿಡ್ಲಘಟ್ಟ ತಾಲ್ಲೂಕು ಕಛೇರಿ ವರೆಗೂ ಸುಮಾರು 400ಕ್ಕೂ ಹೆಚ್ಚು ಮಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಉಪತಹಶೀಲ್ದಾರ್ ಮತ್ತು ತಾಪಂ ಇಓ ರವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.

ಈ ವೇಳೆ ಜೀವಿಕ ರಾಜ್ಯ ಸಂಚಾಲಕ ಡಾ. ಕಿರಣ್ ಕಮಲ್ ಪ್ರಸಾದ್ ಸಭೆಯಲ್ಲಿ ಮಾತನಾಡಿ ತಾಲ್ಲೂಕಿನಲ್ಲಿ ಈಗಾಗಲೇ ಬಿಡುಗಡೆ ಪತ್ರ ಸಿಕ್ಕಿರುವ ಎಲ್ಲಾ ಜೀತದಾಳುಗಳಿಗೆ ಸಮಗ್ರ ಪುನರ್‌ವಸತಿ ಹಾಗೂ ಸರಕಾರದ ಇತರೆ ಸೌಲಭ್ಯ ಒದಗಿಸುವ ಮೂಲಕ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಿಮ್ಮೆಲ್ಲರದ್ದಾಗಿದೆ, ಅನೇಕ ಸಾಮಾಜಿಕ ಅನಿಷ್ಠಗಳಂತೆ ಜೀತ ಪದ್ಧತಿಯೂ ಅನಿಷ್ಠ ಪದ್ಧತಿ. ಇದನ್ನು ಹೋಗಲಾಡಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಜೀವಿಕ ಅಧ್ಯಕ್ಷರು ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಸಂಘದ ಒಕ್ಕೂಟ ಅಧ್ಯಕ್ಷರಾದ ನರಸಿಂಹಪ್ಪ, ಶಿಡ್ಲಘಟ್ಟ ತಾಲೂಕು ಸಂಚಾಲಕರಾದ ಶ್ರೀನಿವಾಸ್, ಕಾರ್ಯಕರ್ತರಾದ ಮುನಿರಾಜು, ಬಾಲರಾಜು, ಗುಡಿಬಂಡೆ ತಾಲ್ಲೂಕು ಸಂಚಾಲಕಿ ಆಮರಾವತಿ, ಬಾಗೇಪಲ್ಲಿ ತಾಲ್ಲೂಕು ಸಂಚಾಲಕ ಅಂಜನಪ್ಪ, ಚಿಂತಾಮಣಿ ತಾಲೂಕು ಸಂಚಾಲಕಿ ಸರಸ್ವತಿ, ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ, ಜಿಲ್ಲಾ ಮಹಿಳಾ ಸಂಚಾಲಕಿ ನಾರಾಯಣಮ್ಮ, ಚಿಕ್ಕಬಳ್ಳಾಪುರ ತಾಲ್ಲೂಕು ಸಂಚಾಲಕ ರವಿ, ಬಂಗಾರಪೇಟೆ ತಾಲ್ಲೂಕು ಸಂಚಾಲಕ ಯಲ್ಲಪ್ಪ, ಶಿಡ್ಲಘಟ್ಟ ತಾಲೂಕು ಕಸಬಾ ಹೋಬಳಿ ಒಕ್ಕೂಟದ ಮುಖಂಡ ಮುನಿಯಪ್ಪ, ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿ ಒಕ್ಕೂಟದ ವೆಂಕಟಪುರದ ವೆಂಕಟರಾವಣಪ್ಪ, ಜಿಲ್ಲೆಯ ಎಲ್ಲಾ ತಾಲ್ಲೂಕು ಪದಾಧಿಕಾರಿಗಳು, ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಮುಖಂಡರು, ಕಾರ್ಯಕರ್ತರು, ಜೀತದಾಳುಗಳು, ದಲಿತ ಸಂಘಟನೆಗಳ ಮುಖಂಡರು ಮತ್ತಿತರರು ಹಾಜರಿದ್ದರು.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ